ಗೋಪಿಚಂದ, ರಾಜಾ - 
ಬಂಗಾಳದ ರಾಜಾ ಮಾನಿಕಚಂದನ ಮಗ. ಬಂಗಾಲದಲ್ಲಿ 1095ರ ವರೆಗೆ ಆಳಿದ ಪಾಲವಂಶದವ. ಇವನಿಗೆ ಗೋವಿಂದ ಚಂದ್ರನೆಂಬ ಇನ್ನೊಂದು ಹೆಸರೂ ಇತ್ತು. ತಿರುಮಲಯದಲ್ಲಿಯ ಶಿಲಾಲೇಖದ ಆಧಾರದಿಂದ ರಾಜೇಂದ್ರ ಚೋಳ ಮಾಣಿಕಚಂದ್ರನ ಮಗ ಗೋವಿಂದ ಚಂದ್ರನನ್ನು ಸೋಲಿಸಿದ್ದು ತಿಳಿದುಬರುತ್ತದೆ. ಬಂಗಾಳದಲ್ಲಿಯ ಗೋವಿಂದಚಂದ್ರರೇಗಾನ ಎಂಬ ಪುಸ್ತಕದಿಂದ ಗೋವಿಂದಚಂದ್ರ ಯಾವನೋ ಒಬ್ಬ ರಾಜನೊಂದಿಗೆ ಯುದ್ಧ ಮಾಡಿದನೆಂಬ ವಿಷಯ ತಿಳಿದುಬರುತ್ತದೆ. ರಾಜೇಂದ್ರ ಚೋಳನ ಕಾಲ 1063 - 1112. ಇದರಿಂದ ಗೋಪೀಚಂದನ ಕಾಲ 11 - 12 ನೆಯ ಶತಮಾನವೆಂದು ಉಹಿಸಬಹುದು. ಗೋಪಿಚಂದನ ತಾಯಿಯ ಹೆಸರು ಮಯನಾವತಿ (ಅಯನಾವತಿ). ಅವಳು ಯಾವುದೋ ಹಾಡೀಸಿದ್ಧನ ಶಿಷ್ಯೆಯಾಗಿದ್ದಳೆಂದು ಐತಿಹ್ಯವಿದೆ. ಈ ಹಾಡೀಸಿದ್ಧ ಜಾಲಂಧರನಾಥನೇ ಎಂದು ಬಂಗಾಳದಲ್ಲಿ ಪ್ರಸಿದ್ಧಿಯಿದೆ. ಸಿಂಧಪ್ರಾಂತದಲ್ಲಿ ಗೋಪೀಚಂದ ವೇರಪಟಾವ ಎಂಬ ಹೆಸರಿನಿಂದ ಪ್ರಸಿದ್ಧನಾಗಿದ್ದನೆನ್ನಲಾಗಿದೆ. ಆ ವೇರಪಟಾವ ಸತ್ತಿದ್ದು 1209 ರಲ್ಲಿ. ಅದರೆ ಅವನೇ ಇವನು ಎಂದು ನಿಶ್ಚಯವಾಗಿ ಹೇಳಲು ಬರುವಂತಿಲ್ಲ. ಗೋಪೀಚಂದ ಬಂಗಾಳದ ರಾಜನಾಗಿದ್ದನೆಂಬುದರಲ್ಲೂ ಸಿದ್ಧ ಅಥವಾ ನಾಥ ಸಂಪ್ರದಾಯದವನಾಗಿದ್ದನೆಂಬುದರಲ್ಲೂ ಸಂಶಯವಿಲ್ಲ.

	ಗೋಪೀಚಂದ ಹಾಗೂ ಮಯನಾವತಿಯರ ಬಗ್ಗೆ ಅನೇಕ ಕಥೆಗಳಿವೆ.

	1 ಗೋಪೀಚಂದ ಬಂಗಾಳದ ರಾಜ. ಭರ್ತೃಹರಿಯ ಸೋದರಿ ಮೈನಾವತಿ ಇವನ ತಾಯಿ. ಗೋರಖ್‍ನಾಥ ಭರ್ತೃಹರಿಗೆ ದೀಕ್ಷೆ ಕೊಡುವಾಗ ಇವಳಿಗೂ ಕೊಟ್ಟಿದ್ದ. ಇವಳನ್ನು ಬಂಗಾಳದ ರಾಜನೊಬ್ಬನಿಗೆ ವಿವಾಹ ಮಾಡಿ ಕೊಟ್ಟಿದ್ದರು. ಇವಳಿಗೆ ಗೋಪಿಚಂದನೆಂಬ ಮಗನೂ ಚಂದ್ರಾವಲಿಯೆಂಬ ಮಗಳೂ ಇದ್ದರು. ಚಂದ್ರಾವಲಿಯ ಮದುವೆ ಸಿಂಹಳದ ರಾಜ ಉಗ್ರಸೇನನೊಂದಿಗೆ ಆಗಿತ್ತು. ತಂದೆಯ ಮರಣಾನಂತರ ಗೋಪಿಚಂದ ರಾಜನಾದಾಗ ತಾಯಿ ತನ್ನ ಮಗನ ಸುಂದರ ರೂಪವನ್ನು ನೋಡಿ ಅದು ವಿಷಯೋಪಭೋಗಕ್ಕೆ ಸಿಲುಕಿ ನಷ್ಟವಾಗುತ್ತದಲ್ಲ - ಎಂದು ಚಿಂತಿಸಿ ಜಾಲಂಧರನಾಥನ ಶಿಷ್ಯನಾಗಿ ಯೋಗದೀಕ್ಷೆಯನ್ನು ಪಡೆದುಕೊಂಡು ಶಾಶ್ವತ ಸುಖಕ್ಕೆ ಭಾಜನನಾಗಬೇಕೆಂದು ಮಗನಿಗೆ ಬುದ್ಧಿ ಹೇಳಿದಳು. ಯೋಗಾಯೋಗದಿಂದ ಜಾಲಂಧರನಾಥ ಅಲ್ಲಿಗೆ ಬಂದ. ಗೋಪೀಚಂದ ಅವನಿಂದ ದೀಕ್ಷೆಯನ್ನು ಪಡೆದು ಕದಲೀವನಕ್ಕೆ ಹೋದ. ಕೆಲಕಾಲ ಕಳೆದ ಮೇಲೆ ತನ್ನ ಸೋದರಿ ಚಂದ್ರವಲಿಯನ್ನು ಆಕೆಯ ಆಗ್ರಹದ ಮೇರೆಗೆ ಯೋಗಿನಿಯನ್ನಾಗಿ ಮಾಡಿದ.

	2 ದುರ್ಲಭ ಚಂದ್ರನ ಗೋಪೀಚಂದ್ರರೇ ಸಂಗೀತ ಎಂಬ ಗ್ರಂಥದ ಕಥಾಸಾರ ಹೀಗಿದೆ. ಜಾಲಂಧರಿಪಾದ ಅಥವಾ ಹಾಡಿಪಾ ಎಂಬಾತ ಶಿವಶಾಪದಿಂದ ಗೋಪೀಚಂದ ಹಾಗೂ ಸಿದ್ಧ ಸಂಪ್ರದಾಯದ ಅವನ ತಾಯಿ ಮಯನಾವತಿಯ ಆಳಾಗುತ್ತಾನೆ. ಮಯನಾವತಿ ಮಗನಿಗೆ ಹಾಡಿಯ ಶಿಷ್ಯನಾಗಿ ಮಹಾಜ್ಞಾನ ಪಡೆಯಲು ಉಪದೇಶಿಸುತ್ತಾಳೆ. ಆದರೆ ಆತ ನೀಚ ಜಾತಿಯ ಹಾಡಿಯಿಂದ ದೀಕ್ಷೆ ಪಡೆಯಲಿಚ್ಛಿಸುವುದಿಲ್ಲ. ಅಲ್ಲದೆ ತಾನು ಸಿದ್ಧಳಾಗಿದ್ದರೆ ತಂದೆಯನ್ನು ಏಕೆ ಬದುಕಿಸಿಕೊಳ್ಳಲಾಗಲಿಲ್ಲವೆಂದು ತಾಯಿಯನ್ನು ಪ್ರಶ್ನಿಸುತ್ತಾನೆ. ಆಗ ಅವಳು ತಾನು ಪತಿಯನ್ನು ಲೋಹ ಕಪಾಟದಲ್ಲಿಟ್ಟು ಯಮದೂತರು ಬಾರದಂತೆ ಕಾವಲಿದ್ದೆನೆಂದೂ ಒಂದು ಸಪ್ತಾಹಾನಂತರ ಪತಿಯ ಆಗ್ರಹದ ಮೇರೆಗೆ ಆಹಾರ ತರಲು ಹೋದಾಗ ಯಮದೂತರು ಅವನನ್ನು ಒಯ್ದರೆಂದೂ ಆಗ ತಾನು ಭ್ರಮರಿಯಾಗಿ ಯಮಪುರಿಗೆ ಹೋದನೆಂದೂ ಸುಡದಿರುವ ಮಣ್ಣನ್ನು ತರಲು ಯಮ ಹೇಳಿದನೆಂದೂ ಸಕಲ ಜೀವಿಗಳು ಬದುಕಿರುವ ಗಂಗಾನದಿಯ ಒಳಗಿನ ಮಣ್ಣನ್ನು ತರಲು ತಾನು ಒಡಂಬಡಲಿಲ್ಲವೆಂದೂ ತಿಳಿಸುತ್ತಾಳೆ. ಆಗ ಗೋಪೀಚಂದ ಪರೀಕ್ಷಿಸಲು ತಾಯಿಯನ್ನು ಅರಗಿನ ಮನೆಯಲ್ಲಿ ಹಾಕಿ ಬೆಂಕಿಯಿಟ್ಟನೆಂದೂ ಕೂದಲು ಕೊಂಕದೇ ಹೊರಬಂದ ಅವಳನ್ನು ನೋಡಿ ಆಕೆಯ ಸಿದ್ಧಿಯ ಬಗ್ಗೆ ಶ್ರದ್ಧೆ ಬಂದು ಹಾಡಿಯಿಂದ ದೀಕ್ಷೆಪಡೆಯಲು ಒಪ್ಪಿದನೆಂದೂ ಕಥೆ. ಹಾಡಿ ಅವನನ್ನು ಪರಿಪರಿಯ ಸಂಕಷ್ಟಗಳಿಗೆ ಗುರಿಮಾಡಿ ಅವನಿಗಿರುವ ದೀಕ್ಷೆಯ ಕಳಕಳಿಯನ್ನು ಮನದಟ್ಟು ಮಾಡಿಕೊಂಡು ಮಹಾಜ್ಞಾನವನ್ನು ಕೊಡುತ್ತಾನೆ. ಅನಂತರ ಗೋಪೀಚಂದ ತನ್ನ ರಾಣಿಯರಿಗೆ ತಾನು ಪಡೆದುಕೊಂಡ ಚಮತ್ಕಾರಗಳನ್ನು ತೋರಿಸಲು ಪ್ರಯತ್ನಿಸಲಾಗಿ ಗುರು ಶಿಷ್ಯನಿಂದ ಆ ಶಕ್ತಿಯನ್ನು ಹಿಂತೆಗೆದುಕೊಂಡು ಬಿಡುತ್ತಾನೆ. ಆಗ ಪತಿಯ ಚಮತ್ಕಾರಗಳು ನಡೆಯದಾಗುತ್ತವೆ. ಆಗ ರಾಣಿಯರು ಗುರು ತಮ್ಮ ಪತಿಗೆ ಮೋಸ ಮಾಡಿದ್ದಾನೆಂದು ಹೇಳುತ್ತಾರೆ. ಅದನ್ನು ನಂಬಿದ ಪತಿ ಧ್ಯಾನಸ್ಥನಾದ ಗುರುವನ್ನು ಸಜೀವ ಸಮಾಧಿ ಮಾಡಿಸುತ್ತಾನೆ. ಹಾಡಿಪಾನ ಶಿಷ್ಯ ಕಾನಪಾ ಎಂಬಾತ ಗೋರಖ್‍ನಾಥನಿಂದ ವಿಷಯವನ್ನು ತಿಳಿದು ರಾಜನಿಗೆ ತನ್ನ ಪ್ರಭಾವ ತೋರಿಸಿ ಹಾಡಿಯನ್ನು ಭೂಮಿಯಿಂದ ಹೊರತೆಗೆಸುತ್ತಾನೆ. ಹಾಗೂ ಗುರುವಿನ ಕೋಪದ ಪರಿಣಾಮ ಗೋಪೀಚಂದನಿಗಾಗದಂತೆ ಮೊದಲು ಗುರುವಿನ ಕೋಪಾಗ್ನಿಗೆ ಮೂರು ಮೂರ್ತಿಗಳನ್ನು ಒಡ್ಡಿ ಅವು ಭಸ್ಮವಾಗುವಂತೆ ಮಾಡಿ ಉಪಾಯದಿಂದ ರಾಜನನ್ನು ಪಾರು ಮಾಡುತ್ತಾನೆ. ರಾಜ ಗುರುವಿನ ಕ್ಷಮೆ ಬೇಡುತ್ತಾನೆ. ಅಲ್ಲದೆ ನಿಜವಾದ ಯೋಗಿಯಾಗಿ ದೇಶಾಂತರ ಹೊರಡುತ್ತಾನೆ. ದುಃಖಿಸುವ ರಾಣಿಯರನ್ನು ಯೋಗಶಕ್ತಿಯಿಂದ ಕಲ್ಲು ಮಾಡುತ್ತಾನೆ. ಮಗನ ಯೋಗ ಜೀವನವನ್ನು ಕಂಡು ತಾಯಿ ಸಂತೋಷಗೊಳ್ಳುತ್ತಾಳೆ.

	ಗೋಪೀಚಂದನ ಬಗ್ಗೆ ಇನ್ನೂ ಅನೇಕ ಪವಾಡ ಕಥೆಗಳಿವೆ. ಮೋಹನಸಿಂಹ ಎಂಬ ವಿದ್ವಾಂಸರು ಪಂಜಾಬ ವಿಶ್ವವಿದ್ಯಾಲಯದಲ್ಲಿರುವ ಹಸ್ತಲಿಖಿತ ಪ್ರತಿಗಳ ಆಧಾರದಿಂದ ಉದಾಸ ಗೋಪೀಚಂದ, ಗಾಥಾ, ಗೋರಖಪದ ಎಂಬ ಪ್ರಕರಣವನ್ನು ಪ್ರಕಟಿಸಿದ್ದಾರೆ. ಇದು ಗೋಪೀಚಂದ ಹಾಗೂ ಮಯನಾವತಿಯರ ನಡುವಿನ ಸಂವಾದ ರೂಪದಲ್ಲಿದೆ. ಗೋಪೀಚಂದನೇ ಇದನ್ನು ಬರೆದನೆನ್ನಲು ಆಧಾರಗಳಿಲ್ಲವಾದರೂ ಈ ಗ್ರಂಥ ಗೋಪೀಚಂದನ ಮತವನ್ನು ತಿಳಿಯಲು ಸಹಾಯಕವಾಗಿದೆ. ಇದರಲ್ಲಿ ಗೋಪಿಚಂದನ ಗುರು ಗೋರಖ್‍ನಾಥನೆಂದಿದೆ.

	ಯೋಗಿ ಸಂಪ್ರದಾಯಾವಿಷ್ಕøತಿ ಎಂಬ ಗ್ರಂಥದಲ್ಲಿ ನವನಾರಾಯಣರು ನವನಾಥರ ರೂಪದಿಂದ ಅವತಾರ ಮಾಡಿದರೆಂದಿದೆ. ಇಲ್ಲಿನ ಪ್ರಕಾರ 9 ನೆಯ ನಾಥ ಗೋಪೀಚಂದ್ರ ದ್ರುಮಿಲನಾರಾಯಣನ ಅವತಾರ.

	ಗೋರಕ್ಷ ಸಿದ್ಧಾಂತದ ಪ್ರಕಾರ ಶಾಕ್ತರ ಆಗಮ ಮೂರು ಪ್ರಕಾರಗಳಿವೆ: ಸಾತ್ತ್ವಿಕ ಅಧಿಕಾರಗಳಿಗೆ ತಂತ್ರ, ರಾಜಸ ಅಧಿಕಾರಗಳಿಗೆ ಯಾಮಲ, ತಾಮಸ ಅಧಿಕಾರಿಗಳಿಗೆ ಡಾಮರ. ತಾಂತ್ರ್ರಿಕರ ಸರ್ವಶ್ರೇಷ್ಠವಾದ ಕೌಲಾಚಾರವೇ ಅವಧೂತ ಮಾರ್ಗ. ತಾಂತ್ರಿಕರು ಹಾಗೂ ಅವಧೂತರಲ್ಲಿ ಭೇದಗಳುಂಟು. ತಾಂತ್ರಿಕರು ಮೊದಲು ಬಹುರಂಗ ಉಪಾಸನೆ ಮಾಡುತ್ತಾರೆ. ಕೊನೆಗೆ ಕ್ರಮಶಃ ಸಿದ್ಧಿಯನ್ನು ಪಡೆಯುತ್ತ, ಕುಂಡಲೀನೀಶಕ್ತಿಯ ಉಪಾಸನೆಯನ್ನು ಮಾಡುತ್ತಾರೆ. ಇದೇ ಅವಧೂತಮಾರ್ಗದವರ ಉಪಾಸನಾಕ್ರಮ. ತಾಂತ್ರಿಕರ ಕೌಲ ಮಾರ್ಗದವರೂ ಕಾಪಾಲಿಕ ಮತದವರೂ ನಾಥಮತಾನುಯಾಯಿಗಳೇ. ಗೋಪೀಚಂದ ನಾಥಪಂಥಾನುಯಾಯಿಯಾಗಿ ಯೋಗದಿಂದ ಸಾಕ್ಷಾತ್ಕಾರ ಪಡೆದುಕೊಂಡ ಒಬ್ಬ ರಾಜವರೇಣ್ಯ.

	ಈಗಿರುವ ಜಯಪುರದ ಪಾವನಾಥ ಶಾಖೆಯವರು ತಮ್ಮ ಪರಂಪರೆಯನ್ನು ಜಾಲಂಧರನಾಥ ಮತ್ತು ಗೋಪೀಚಂದರೊಡನೆ ಹೊಂದಿಸುತ್ತಾರೆ. ಸಿದ್ಧಾಂತ ವಾಕ್ಯವೆಂಬ ಗ್ರಂಥದ ಆಧಾರದಿಂದ ಮುದ್ರಾನಾದ, ತ್ರಿಶೂಲ ಧಾರಣ ಮಾಡುವ ನಾಥರೇ ಇವರ ಉಪಾಸಕರು. ಮತ್ತೊಂದು ಪರಂಪರಾನುಸಾರ, ವಾಮಮಾರ್ಗ ಸಂಪ್ರದಾಯ ಕಾನಿಪಾ ಪಂಥದೊಂದಿಗೆ ಸೇರುತ್ತದೆ. ಇದರಿಂದ, ಮೊದಲು ಕಾಪಾಲಿಕ ಪಂಥಕ್ಕೆ ಸ್ವಂತ ಅಸ್ತಿತ್ವವಿತ್ತೆಂದೂ ಅನಂತರ ಗೋರಖ್‍ಪಂಥದ ಅನುಯಾಯಿಗಳ ಗುಂಪಿನೊಡನೆ ಅದು ಸೇರ್ಪಡೆ ಹೊಂದಿತೆಂದೂ ಊಹಿಸಲು ಅವಕಾಶವಿದೆ. ಕಾಲಜ್ಞಾನನಿರ್ಣಯದಲ್ಲಿ ವಾಮಮಾರ್ಗದಲ್ಲಿನ ಮದ್ಯಮಾಂಸಾದಿಗಳಿಗೆ ಆಧ್ಯಾತ್ಮಿಕ ಅರ್ಥ ಕೊಡಲ್ಪಟ್ಟಿದೆ. ಜೀವಾತ್ಮವನ್ನು ಪರಮಾತ್ಮನಲ್ಲಿ ಲೀನ ಮಾಡುವುದೇ ಹಠಯೋಗಿಗಳ ಉದ್ದೇಶ, ಅದರಿಂದ ಬರುವ ಅನಂದ ಯೋಗಿಗಳ ನಿರ್ವಿಕಲ್ಪ ಬ್ರಹ್ಮಾನಂದದಿಂದ ಅಭಿನ್ನ ಎಂದು ಕೌಲತಾಂತ್ರಿಕರ ಅಭಿಪ್ರಾಯ.              (ಎನ್.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ